ಕ್ರೀಟ್ ಸಂಸ್ಕೃತಿ 

	ಗ್ರೀಸ್ ಮತ್ತು ತುರ್ಕಿಗಳ ದಕ್ಷಿಣಕ್ಕೆ ಮತ್ತು ಈಜಿಪ್ಟಿನ ಉತ್ತರಕ್ಕೆ-ಮೆಡಿಟರೇನಿಯನ್ ಸಮುದ್ರದಲ್ಲಿ-ಇರುವ ಕ್ರೀಟ್ ದ್ವೀಪದಲ್ಲಿ ಕ್ರಿ.ಪೂ. 4ನೆಯ ಸಹಸ್ರಮಾನದಿಂದ ಬೆಳೆದು ಬಂದ ಸಂಸ್ಕøತಿ. ಗ್ರೀಕ್ ಮಹಾಕಾವ್ಯಗಳಿಗಿಂತ ಹಲವು ಶತಮಾನಗಳ ಹಿಂದೆಯೇ ಇದ್ದ ಈ ಸಂಸ್ಕøತಿಯ ಬಗ್ಗೆ ಹೋಮರ್ ಮತ್ತು ಹೆಸಿಯಡರ ಮಹಾಕಾವ್ಯಗಳಲ್ಲಿ ಬರುವ ದಂತಕಥೆಗಳಿಂದ ಅಲ್ಪಸ್ವಲ್ಪ ವಿಷಯ ತಿಳಿದುಬರುತ್ತದೆ. ಆದರೆ ಈ ಉಲ್ಲೇಖಗಳು ಬರಿಯ ದಂತ ಕಥೆಗಳೆಂದೂ ಇವಕ್ಕೂ ಐತಿಹಾಸಿಕ ಸತ್ಯಕ್ಕೂ ಯಾವ ಸಂಬಂಧವೂ ಇಲ್ಲವೆಂದೂ ಪ್ರಸಿದ್ಧ ಚರಿತ್ರಕಾರರು ಅಭಿಪ್ರಾಯ ಸೂಚಿಸಿದ್ದಾರೆ. ಈ ಭವ್ಯ ಸಂಸ್ಕøತಿಯನ್ನು 1900ರಲ್ಲಿ ಆರ್ಥರ್ ಇವಾನ್ಸ್ ಬೆಳಕಿಗೆ ತಂದ. ಕ್ರೀಟ್ ಸಂಸ್ಕøತಿಗೆ ಮಿನೋವನ್ ಸಂಸ್ಕøತಿಯೆಂಬ ಹೆಸರೂ ಇದೆ. ಗ್ರೀಕ್ ದಂತಕಥೆಗಳಲ್ಲಿ ಬರುವ ಮೈನಾಸ್ ರಾಜನ ಹೆಸರಿನ ಮೇಲೆ ಇದನ್ನು ಆತ ಹೀಗೆಂದು ಕರೆದ.

	ಈ ನಗರಸಂಸ್ಕøತಿಯನ್ನು ಪ್ರತಿನಿಧಿಸುವ ಸ್ಥಳಗಳಾದ ಪೈಸ್ಟಾಸ್, ಅಯಿಯ-ಟ್ರಿಯಾಡ, ಗೌರ್ನಿಯ, ಪ್ರೈಸೊಸ್, ಪಲೈಕಸ್ಟ್ರೋನ್, ಮಲ್ಲಿಯ ಹಾಗೂ ನಾಸ್ಸಸ್‍ಗಳಲ್ಲಿ ನವಶಿಲಾಯುಗದಿಂದ ಕ್ರೀಟ್ ಸಂಸ್ಕøತಿಯ ಅವನತಿಯವರೆಗಿನ ಕಾಲವನ್ನು ಪ್ರತಿಬಿಂಬಿಸುವ ಅವಶೇಷಗಳನ್ನೊಳಗೊಂಡ ನಾಸ್ಸಸ್ ಅತಿ ಮುಖ್ಯವಾದ್ದು. 

	ಕ್ರೀಟ್ ಸಂಸ್ಕøತಿಯ ಎರಡಂತಸ್ತಿನ ಚಕ್ರವ್ಯೂಹ ಅರಮನೆಗಳು, ವಾಸದ ಮನೆಗಳು ಹಾಗೂ ಚರಂಡಿಗಳ ಅವಶೇಷಗಳನ್ನು ನೋಡಿದರೆ ಈ ಜನತೆ ಗಳಿಸಿದ್ದ ವಾಸ್ತುವಿದ್ಯಾಕೌಶಲ ಬೆರಗುಗೊಳಿಸುವಂಥದೆನಿಸುತ್ತದೆ. ಕೈರಟೊಸ್ ನದಿಯ ದಡದಲ್ಲಿರುವ ನಾಸ್ಸಸ್‍ನ ಅರಮನೆ ಹಲವು ಆವಾರಗಳಿಂದ ಪ್ರವೇಶಿಸಬಹುದಾದಂಥ ಹಾಗೂ ಬೆಳಕಿನ ಕಿಂಡಿಗಳನ್ನುಳ್ಳ ಮಧ್ಯ ಪ್ರಾಂಗಣ, ಪಡಸಾಲೆಗಳು, ಸಿಂಹಾಸನದ ಕೊಠಡಿ, ಧಾರ್ಮಿಕ ಸಂಸ್ಕಾರಕ್ಕಾಗಿ ಕಟ್ಟಿಸಿದ ತೊಟ್ಟಿ, ಖಾಸಗಿ ಕೊಠಡಿಗಳು ಗುಪ್ತ ಕೊಠಡಿಗಳೂ, ಉಗ್ರಾಣಗಳು, ಪಾವಟಿಗೆಗಳು ಹಾಗೂ ಸ್ನಾನದ ಕೊಠಡಿಗಳಿಂದೊಡಗೂಡಿದೆ. ಇವುಗಳಲ್ಲಿ ಸಿಂಹಾಸನದ ಕೊಠಡಿ ಅತಿಮುಖ್ಯವಾದ್ದು ಮತ್ತು ಸುಂದರವಾದ್ದು. ಇತರ ಕೊಠಡಿಗಳೊಂದಿಗೆ ಹೋಲಿಸಿದರೆ ಇದು ಚಿಕ್ಕದು. ಇದಕ್ಕೆ ಹೊಂದಿಕೊಂಡು ಮತ್ತೊಂದು ಚಿಕ್ಕ ಕೊಠಡಿ ಇದೆ. ಸಿಂಹಾಸನದ ಕೊಠಡಿಯ ನೆಲಕ್ಕಿಂತ ಅದರದು ಬಹಳ ತಗ್ಗಿನಲ್ಲಿದೆ. ಈ ಕೊಠಡಿಯನ್ನು ಧಾರ್ಮಿಕ ಸಂಸ್ಕಾರಕ್ಕಾಗಿ ತೊಟ್ಟಿಯಾಗಿ ಉಪಯೋಗಿಸಿದ್ದಿರಬೇಕು. ಇದಕ್ಕೆ ಎದುರಿನಲ್ಲಿ ಸಿಂಹಾಸನದ ಕೊಠಡಿಯ ಗೋಡೆಗೆ ಹತ್ತಿದಂತೆ ಅಮೃತಶಿಲೆಯಲ್ಲಿ ಕೆತ್ತಿದ ಸಿಂಹಾಸನವನ್ನು ಇರಿಸಲಾಗಿದೆ. ಸಿಂಹಾಸನದ ಎರಡು ಪಕ್ಕಗಳಲ್ಲೂ ಗೋಡೆಗೆ ಹತ್ತಿದಂತೆ ಕಲ್ಲಿನ ಆಸನಗಳನ್ನು ಹಾಕಲಾಗಿದೆ. ಸಿಂಹಾಸನದ ಅಕ್ಕಪಕ್ಕಗಳಲ್ಲಿ ಗೋಡೆಗಳನ್ನು ಸಿಂಹದ ದೇಹ ಮತ್ತು ಹದ್ದಿನ ಕೊಕ್ಕು ಉಳ್ಳ ಪ್ರಾಣಿಗಳ ಮತ್ತು ಸಾಂಪ್ರದಾಯಿಕ ಗಿಡಗಳ ಚಿತ್ರಗಳಿಂದ ಅಲಂಕರಿಸಲಾಗಿದೆ.

	ಅರಮನೆಯ ಇನ್ನೊಂದು ಎಡೆಯಲ್ಲಿ ದೊಡ್ಡದೊಡ್ಡ ಜಾಡಿಗಳಿಂದ ಕೂಡಿದ ಕೊಠಡಿಗಳಿವೆ. ಇವು ಅರಮನೆಯ ಉಗ್ರಾಣಗಳಾಗಿರಬೇಕು. ಜಾಡಿಗಳಲ್ಲಿ ಇಪ್ಪೆ ಎಣ್ಣೆ, ಮದಿರೆ, ದವಸ-ಧಾನ್ಯ ಹಾಗೂ ಹಣ್ಣುಗಳನ್ನು ಸಂಗ್ರಹಿಸಿಡುತ್ತಿದ್ದರಬೇಕು. ಕೆಲವೆಡೆಗಳಲ್ಲಿ ಕಲ್ಲಿನ ಪೆಟ್ಟಿಗೆಗಳನ್ನು ನೆಲದಲ್ಲಿ ಹೂತಿರುವುದನ್ನು ನೋಡಬಹುದು. ಬಂಗಾರ ಹಾಗೂ ಹೆಚ್ಚು ಬೆಲೆಬಾಳುವ ವಸ್ತುಗಳನ್ನು ಗುಪ್ತವಾಗಿಡಲು ಇವುಗಳನ್ನು ಉಪಯೋಗಿಸುತ್ತಿದ್ದಿರಬೇಕು. ಈ ಅರಮನೆಯ ಮತ್ತೊಂದೆಡೆ, ಮಣ್ಣಿನ ಬಿಲ್ಲೆಗಳ ಮೇಲೆ ಲೆಕ್ಕಪತ್ರಗಳನ್ನಿಡುತ್ತಿದ್ದ ಅರಮನೆಯ ಗುಮಾಸ್ತರಿಗಾಗಿ ಕಟ್ಟಿಸಿದ್ದ ಕೊಠಡಿಗಳಿವೆ. ಇನ್ನೊಂದೆಡೆಯಲ್ಲಿ ಶಿಲ್ಪಿ ಹಾಗೂ ಕುಶಲಕಲಾಕಾರರ, ಬಂಗಾರವೇ ಮುಂತಾದ ಲೋಹಗಳ ಮತ್ತು ಕಲ್ಲಿನ ಕೆಲಸವನ್ನೂ ಮಣ್ಣಿನ ಪಾತ್ರೆಗಳನ್ನೂ ಮಾಡುವವರ ಹಾಗೂ ಇನ್ನಿತರರ ಕೊಠಡಿಗಳಿವೆ.

	ಸಮುದ್ರಕ್ಕೆ ಮುಖಮಾಡಿ ನಿಂತಿರುವ ಮಹಾದ್ವಾರ ಅಥವಾ ಸಮುದ್ರದ್ವಾರ ಅತ್ಯಾಕರ್ಷಕವಾದ್ದು. ಏರುತ್ತ ಬರುವ ಹಾಸುಗಲ್ಲಿನ ಹಾದಿ ತಳದಲ್ಲಿ ಕಿರಿದಾಗುವ ಕಂಬಗಳಿಂದ ಕೂಡಿದ ಮುಖಮಂಟಪಗಳ ಮಧ್ಯದಲ್ಲಿ ಹಾದು ಮಧ್ಯಪ್ರಾಂಗಣವನ್ನು ಸೇರುತ್ತದೆ. ಮುಖಮಂಟಪಗಳು ವಿವಿಧ ಬಣ್ಣಗಳ ಚಿತ್ರಗಳಿಂದ ಅಲಂಕೃತವಾಗಿರುತ್ತಿದ್ದುವು. ಒಂದು ಮುಖಮಂಟಪದಲ್ಲಿ ಹೋರಿಯ ಮೇಲೆ ಮನುಷ್ಯ ನೆಗೆಯುತ್ತಿರುವ ದೃಶ್ಯದ ಚಿತ್ರವಿದೆ.

	ದ್ವೀಪದ ಎಲ್ಲೆಡೆಗಳಲ್ಲೂ ಅರಮನೆಗಳನ್ನು ನಾಸ್ಸಸ್ ಅರಮನೆಯಂತೆಯೇ ಕಟ್ಟುತ್ತಿದ್ದರು. ಅರಮನೆ ಹಾಗೂ ವಾಸದ ಮನೆಗಳನ್ನು ಕಟ್ಟಲು ಕಲ್ಲುಗಳನ್ನೂ ಯಥೇಚ್ಛವಾಗಿ ಮರವನ್ನೂ ಉಪಯೋಗಿಸುತ್ತಿದ್ದರು. ಧಾರ್ಮಿಕ ಜೀವನವನ್ನೂ ಇತರ ಬಗೆಯ ಚಟುವಟಿಕೆಗಳನ್ನೂ ಕುರಿತ ಚಿತ್ರಗಳಿಂದ ಗೋಡೆಗಳನ್ನು ಅಲಂಕರಿಸುತ್ತಿದ್ದರು. ವಾಸದ ಮನೆಗಳನ್ನು ಕೂಡ ಸಾಧಾರಣ ಅರಮನೆಯ ರೀತಿಯಲ್ಲೇ ಕಟ್ಟುತ್ತಿದ್ದರು.

	ಕೊಳಚೆ ನೀರನ್ನು ನದಿಗೆ ಸಾಗಿಸಲು ಮಾಡಿದ್ದ ವ್ಯವಸ್ಥೆಯನ್ನು ನೋಡಿದಾಗ ಈ ಜನರಿಗೆ ಜಲಗತಿವಿಜ್ಞಾನ ಮತ್ತು ಆರೋಗ್ಯ ರಕ್ಷಣೆಯ ಬಗ್ಗೆ ತಿಳಿವಳಿಕೆಯಿದ್ದಿತೆಂಬುದು ವ್ಯಕ್ತವಾಗುತ್ತದೆ. ಅರಮನೆಯ ಪ್ರತಿಭಾಗದಿಂದಲೂ ಕೊಳಚೆ ನೀರು ಮೋರಿಗಳ ಮೂಲಕ ದೊಡ್ಡ ಮೋರಿಗೆ ಸೇರಿ ಅಲ್ಲಿಂದ ನದಿಗೆ ಸೇರುವಂತೆ ಅವರು ವ್ಯವಸ್ಥೆ ಮಾಡಿರುತ್ತಿದ್ದರು. ಈ ಚರಂಡಿ ವ್ಯವಸ್ಥೆ ಇದ್ದದ್ದು ನೆಲದ ಕೆಳಗೆ. ಛತ್ತಿನ ಮೇಲೆ ಬಿದ್ದ ಮಳೆಯ ನೀರು ಗೋಡೆಗಳೊಳಗೆ ಕೊರೆದಿರುತ್ತಿದ್ದ ನಾಲೆಗಳ ಮೂಲಕ ನೆಲದೊಳಗಿನ ಮೋರಿಗೆ ಸೇರುವಂತೆ ವ್ಯವಸ್ಥೆ ಮಾಡಿರುತ್ತಿದ್ದರು. ಮೋರಿಗಳನ್ನು ಸ್ವಚ್ಛಪಡಿಸಲು ಅಲ್ಲಲ್ಲಿ ಕಿಂಡಿಗಳಿದ್ದುವು. ಕೆಲವೆಡೆಗಳಲ್ಲಿ ಮಣ್ಣಿನ ಕೊಳವೆಗಳನ್ನು ಉಪಯೋಗಿಸುತ್ತಿದ್ದುದುಂಟು. ದೊಡ್ಡ ಮೋರಿಯಲ್ಲಿ ನೀರು ರಭಸವಾಗಿ ಹರಿದು ಮೇಲೆ ಬರದಂತೆ ಅಲ್ಲಲ್ಲಿ ಸಮಕಕ್ಷಭಿನ್ನ ತಿರುವುಗಳಿರುತ್ತಿದ್ದುವು.

	 ಕುಂಬಾರನ ಚಕ್ರದ ಮೇಲೆ ಇಪ್ಪೆ ಎಣ್ಣೆ ಮತ್ತು ಮದಿರೆ ತುಂಬಲು ಮಾಡಿದ್ದ ದೊಡ್ಡ ಜಾಡಿಗಳೂ ಧಾರ್ಮಿಕ ಕಾರ್ಯಗಳಿಗಾಗಿ ಹಾಗೂ ನಿತ್ಯಜೀವನದಲ್ಲಿ ಉಪಯುಕ್ತವಾಗಿದ್ದ ಮಣ್ಣಿನ ಪಾತ್ರೆಗಳೂ ಇವರು ಸಾಧಿಸಿದ್ದ ನೈಪುಣ್ಯಕ್ಕೆ ಇನ್ನೆರಡು ನಿದರ್ಶನಗಳು. ಚಿತ್ರಾಲಂಕೃತವಾದ, ಮೊಟ್ಟೆಯ ಸಿಪ್ಪೆಯಷ್ಟು ತೆಳುವಾದ ಮಣ್ಣಿನ ಪಾತ್ರೆಗಳು ಅತ್ಯಂತ ಸುಂದರವಾಗಿವೆ. ಮಡಕೆಗಳ ಮೇಲೆ ಚಿತ್ರ ಬಿಡಿಸುವುದನ್ನು ಇವರು ಒಂದು ಕಲೆಯಾಗಿಯೇ ಅಭ್ಯಸಿಸಿದ್ದಿರಬೇಕೆಂಬುದು ಇವರು ಬಿಡಿಸಿರುವ ಕೆಲವು ಸಂಕೀರ್ಣವಾದ ಮತ್ತು ವೈವಿಧ್ಯಮಯವಾದ ಚಿತ್ರಗಳಿಂದ ವೇದ್ಯವಾಗುತ್ತದೆ. ಮಣ್ಣಿನಲ್ಲೇ ಚಿತ್ರವಿಚಿತ್ರವಾದ ಪ್ರತಿರೂಪಗಳನ್ನು ಮಾಡಿ, ಪಾತ್ರೆಗಳನ್ನು ಸುಡುವುದಕ್ಕಿಂತ ಮೊದಲೇ ಅವಕ್ಕೆ ಅಂಟಿಸುವುದು ಇವರು ಅನುಸರಿಸುತ್ತಿದ್ದ ಇನ್ನೊಂದು ಪಾತ್ರಾಲಂಕರಣ ವಿಧಾನ.

	ತಾಮ್ರದ ಬಳಕೆಯನ್ನು ಇವರು ಹೊರದೇಶದಿಂದ ಕಲಿತರೂ ಸ್ವಲ್ಪ ಸಮಯದಲ್ಲೇ ತಮಗೆ ಬೇಕಾದ ಆಯುಧ ಹಾಗೂ ಸಲಕರಣೆಗಳನ್ನು ಮಾಡಿಕೊಳ್ಳುವುದನ್ನು ಹಸ್ತಗತ ಮಾಡಿಕೊಂಡಿದ್ದರು.

	ಗೋಡೆಗಳ ಮೇಲೆ ವಿವಿಧ ವರ್ಣಗಳ ಚಿತ್ರ ಬಿಡಿಸುವುದು ಈ ಜನ ಕಲಿತಿದ್ದ ಇನ್ನೊಂದು ಕಲೆ. ಸಾಮಾಜಿಕ ಮತ್ತು ಧಾರ್ಮಿಕ ದೃಶ್ಯಗಳನ್ನು ಹಾಗೂ ಜಲಚರ ಪ್ರಾಣಿಗಳನ್ನು ನೈಜವಾಗಿ ಹಾಗೂ ಸುಂದರವಾಗಿ ಇವರು ಚಿತ್ರಿಸಿದ್ದಾರೆ. ಮಾತೃದೇವತೆಯ ಮಂದಿರದ ಮುಂದೆ ಕುಳಿತಿರುವ ರಾಜಪರಿವಾರ ಮತ್ತು ಸ್ತ್ರೀಸಮೂಹ, ಕ್ರೀಡಾಪಟುಗಳು ಗೂಳಿಯ ಮೇಲೆ ನೆಗೆಯುವ ದೃಶ್ಯ, ಸಮುದ್ರದೊಳಗೆ ಗಿಡಗಳ ಮಧ್ಯದಲ್ಲಿರುವ ಹಂದಿ ಮೀನುಗಳು ಹಾಗೂ ಚಿಕ್ಕಮೀನುಗಳು-ಇಂಥ ಚಿತ್ರಗಳು ಈ ಜನತೆ ಗಳಿಸಿದ್ದ ನೈಪುಣ್ಯವನ್ನು ಪ್ರದರ್ಶಿಸುತ್ತವೆ. ಮುದ್ರೆಗಳನ್ನು ಮಾಡುವುದು, ದಂತ ಮತ್ತು ಕಲ್ಲಿನಲ್ಲಿ ಕೆತ್ತನೆಯ ಕೆಲಸ, ಮಣ್ಣಿನ ಮತ್ತು ಪಿಂಗಾಣಿಯ ಗೊಂಬೆಗಳ ತಯಾರಿಕೆ, ಬಂಗಾರ ಮತ್ತು ಇತರ ಬೆಲೆಬಾಳುವ ಲೋಹಗಳಲ್ಲಿ ಆಭರಣಗಳ ನಿರ್ಮಾಣ-ಈ ಕಲೆಗಳಲ್ಲೂ ಇವರು ತಕ್ಕಮಟ್ಟಿನ ನೈಪುಣ್ಯ ಸಾಧಿಸಿದ್ದರು.

	ಇವರ ಕ್ರೀಡೆಗಳ ಪೈಕಿ ಗೂಳಿಯ ಮೇಲೆ ನೆಗೆಯುವ ಆಟ ಮುಖ್ಯಸ್ಥಾನ ಪಡೆದಿದ್ದಂತೆ ತೋರುತ್ತದೆ. ದ್ವೀಪದ ಅರಮನೆಯ ಪ್ರಾಂಗಣದಲ್ಲಿ ಹಬ್ಬದ ದಿನಗಳಲ್ಲಿ ಇದನ್ನು ಬಹುಶಃ ಆಡುತ್ತಿದ್ದರು. ಇದರಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಲ್ಲಿ ಚಾಕಚಕ್ಯತೆ, ಅಸಾಧಾರಣವಾದ ಧೈರ್ಯ ಮತ್ತು ಕಠೋರ ಅಭ್ಯಾಸಬಲ ಇರುತ್ತಿದ್ದುವೆಂದು ಕಾಣುತ್ತದೆ. ಅಟ್ಟಿಸಿಕೊಂಡು ಬರುವ ಕೊಬ್ಬಿದ ಗೂಳಿಯ ಕೋಡುಗಳನ್ನು ಹಿಡಿದು ಅದರ ಬೆನ್ನ ಮೇಲೆ ಜಿಗಿಯುವುದೂ ಹಾರುವವನು ಸಮತೋಲ ತಪ್ಪಿ ಬೀಳದಂತೆ ಹಿಡಿದು ನಿಲ್ಲಿಸಲು ಕೈಚಾಚಿ ಗೂಳಿಯ ಬಾಲದ ಕಡೆಯಲ್ಲಿ ನಿಂತವನ ಕೈಗೆ ಹಾರುವುದೂ ಈ ಆಟದ ವಿಧಾನ. ಹೀಗೆ ಒಬ್ಬನಾದ ಮೇಲೊಬ್ಬನಂತೆ ಅನೇಕರು ಹಾರುತ್ತಿದ್ದರೆಂದು ಕಾಣುತ್ತದೆ. ಈ ಆಟವನ್ನು ಆಡಲೂ ಇದನ್ನು ವೀಕ್ಷಿಸಲು ಅನುಕೂಲವಾಗುವಂತೆ ನಿರ್ಮಿಸಿದ್ದ ಕ್ರೀಡಾಗಾರದ ಅವಶೇಷಗಳು ಸಿಕ್ಕಿವೆ. ಈ ಆಟಕ್ಕೆ ಧಾರ್ಮಿಕ ಹಿನ್ನೆಲೆಯಿತ್ತೇ ಅಥವಾ ಇದರದು ಲೌಕಿಕ ಹಿನ್ನೆಲೆಯೇ ಎಂಬುದನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಆದರೆ ನಾಸ್ಸಸ್‍ನ ಒಂದು ಮನೆಯ ತಳಪಾಯದ ಕೆಳಗೆ ಗೂಳಿಯೊಂದರ ಅಸ್ಥಿಪಂಜರ ಸಿಕ್ಕಿದೆ. ಕ್ರೀಡಾ ಪಟುಗಳಿಂದ ಸೋಲಿಸಲ್ಪಟ್ಟ ಗೂಳಿಗಳನ್ನು ಮಾತೃದೇವತೆಗೆ ಬಲಿ ಕೊಡುತ್ತಿದ್ದಿರಬಹುದು ಎಂಬುದಾಗಿ ಊಹಿಸಬಹುದಾಗಿದೆ. ಆದರೆ ಮಿನೋವನ್ ನಾಗರಿಕತೆ ಅತ್ಯಂತ ಉನ್ನತವಾಗಿದ್ದಾಗ ಇದನ್ನು ಲೌಕಿಕ ಆಟವನ್ನಾಗಿ ಆಡುತ್ತಿದ್ದರು. ಈ ಆಟದ ಜೊತೆಗೆ ಓಟ, ಮುಷ್ಟಿಯುದ್ಧ ಇವನ್ನೂ ಆಡುತ್ತಿದ್ದರೆಂಬುದಕ್ಕೆ ಆಧಾರಗಳಿವೆ. ನೃತ್ಯ ಕೂಡ ಇವರ ಧಾರ್ಮಿಕ ಲೌಕಿಕ ಜೀವನದಲ್ಲಿ ಒಂದು ಮುಖ್ಯಸ್ಥಾನ ಗಳಿಸಿತ್ತು.

	ಕ್ರೀಟ್ ನಾಗರಿಕತೆಯಲ್ಲಿ ದೇವಾಲಯಗಳನ್ನು ಕಟ್ಟಿಲ್ಲ. ಆದರೆ ಧಾರ್ಮಿಕ ಸಂಸ್ಕಾರಗಳನ್ನು ಅರಮನೆಯಲ್ಲೋ ವಾಸದ ಮನೆಗಳಲ್ಲೋ ಇದಕ್ಕಾಗಿಯೇ ಮೀಸಲಾಗಿದ್ದ ಕೊಠಡಿಯಲ್ಲಿ, ನೆರವೇರಿಸುತ್ತಿದ್ದರು. ಇವರು ಮಾತೃದೇವತೆಯ ಆರಾಧಕರಾಗಿದ್ದರು. ಆಕೆಗಾಗಿ ಬಯಲು ಪ್ರದೇಶದಲ್ಲಿ ಮರಗಳ ಅಥವಾ ಕಂಬಗಳ ಕೆಳಗೆ ಚಿಕ್ಕ ಗುಡಿಗಳನ್ನು ಕಟ್ಟುತ್ತಿದ್ದರು; ಬೆಟ್ಟಗಳ ಗುಹೆಗಳಲ್ಲೂ ಮಾತೃದೇವತೆಯನ್ನು ಪ್ರತಿಷ್ಠಾಪಿಸುತಿದ್ದರು. ಪ್ರಾಣಿಗಳ ಒಡತಿಯಾಗಿ, ಸಮುದ್ರ ದೇವತೆಯಾಗಿ, ಬೆಟ್ಟಗಳ ರಾಣಿಯಾಗಿ ಅಥವಾ ಪೀಡಕ ಬಲಗಳ ಅಧಿದೇವತೆಯಾಗಿ ಪಕ್ಷಿಯನ್ನೋ ಅಭಿಮಂತ್ರಿತ ಕೊಂಬುಗಳನ್ನೋ ಹೂವನ್ನೋ ಹಾವುಗಳನ್ನೋ ಹಿಡಿದಂತೆ ಆಕೆಯನ್ನು ರೂಪಿಸಿ ಪೂಜಿಸುತ್ತಿದ್ದರು.

	ಗೂಳಿಯ ಕೊಂಬುಗಳೂ ಎರಡು ಬಾಯಿಗಳಿದ್ದ ಕೊಡಲಿಯೂ ಈ ಜನತೆಗೆ ಪವಿತ್ರ ಗುರುತುಗಳಾಗಿದ್ದುವು. ಅರಮನೆಯ ಹಲವೆಡೆಗಳಲ್ಲಿ ಮುಖ್ಯವಾಗಿ ಪವಿತ್ರ ಸ್ಥಳದಲ್ಲಿ ಈ ಗುರುತುಗಳನ್ನು ಚಿತ್ರಿಸಿರುತ್ತಿದ್ದರು. ಹೋರಿಯನ್ನು ಬಹುಶಃ ಇಂಥ ಕೊಡಲಿಯಿಂದಲೇ ಬಲಿ ಕೊಡುತ್ತಿದ್ದಿರಬೇಕು. ಹಲವೆಡೆ ಮಾತೃದೇವತೆಯ ಕೈಯಲ್ಲಿ ಇಂಥ ಆಯುಧವಿರುತ್ತದೆ.

	ಹೆಂಗಸರು ನೆರಿಗೆಯ ಉದ್ದಲಂಗ ಹಾಗೂ ಬಿಗಿಯಾದ ರವಿಕೆ ತೊಡುತ್ತಿದ್ದರು. ಕುಚಗಳನ್ನು ಮುಚ್ಚಿಕೊಳ್ಳುತ್ತಿರಲಿಲ್ಲ. ತಲೆಗೂದಲನ್ನು ಗುಂಗುರುಗುಂಗುರಾಗಿ ಮಾಡಿ ಹಿಂದಕ್ಕೆ ಬೆನ್ನಿನ ಮೇಲೆ ಬಿಡುತ್ತಿದ್ದರು. ಗಂಡಸರು ಸಾಧಾರಣವಾಗಿ ಟೊಂಕದಿಂದ ಮೊಳಕಾಲಿನವರೆಗೆ ಬಿಗಿಯಾದ ಲಂಗವನ್ನು ಧರಿಸುತ್ತಿದ್ದರು. ತಲೆಗೂದಲನ್ನು ಹೆಂಗಸರಂತೆಯೇ ಬಿಡುತ್ತಿದ್ದರು. ಗಂಡಸರು ಮತ್ತು ಹೆಂಗಸರು ಕೈಕಡಗ ಮತ್ತು ಕಂಠಾಭರಣಗಳನ್ನು ತೊಡುತ್ತಿದ್ದರು. ಹೆಂಗಸರು ಬಂಗಾರ ಅಥವಾ ಬೆಳ್ಳಿಯ ಸೂಕ್ಷ್ಮ ತಂತಿಗಳಿಂದ ಮಾಡಿದ ಒಡವೆಗಳನ್ನು ತಲೆಗೂದಲುಗಳಲ್ಲಿ ಧರಿಸುತ್ತಿದ್ದರು. ಗಂಡಸರು ತಲೆಗೂದಲನ್ನು ಮಣಿಗಳಿಂದ ಭದ್ರಪಡಿಸಿಕೊಳ್ಳುತ್ತಿದ್ದರು. ಅವರು ಕಾಲ ಕಡಗ, ಮಣಿಕಟ್ಟಿಗೆ ಕಲ್ಲಿನ ಮುದ್ರೆ ಮತ್ತು ನಡುಪಟ್ಟಿಯನ್ನು ಧರಿಸುತ್ತಿದ್ದರು.

	ಕ್ರೀಟ್ ನಾಗರಿಕತೆಯ ಆದಿ ಭಾಗದಲ್ಲಿ ಸ್ವದೇಶಿ ಚಿತ್ರಲಿಪಿಯ ಬರೆಹ ಬಳಕೆಯಲ್ಲಿತ್ತು. ಇದನ್ನು ಕಲ್ಲಿನ ಮುದ್ರೆಗಳು ಮತ್ತು ಮಣ್ಣಿನ ಬಿಲ್ಲೆಗಳ ಮೇಲೆ ಕೊರೆಯುತ್ತಿದ್ದರು. ಈ ಬರಹ ಇವಾನ್ಸ್ ಲೀನಿಯಾರ್-ಎ ಎಂದು ಹೆಸರಿಸಿರುವ, ಅನಂತರ ಕಾಲದ, ಲಿಪಿಗೆ ಮೂಲವಾಯಿತು. ಶಬ್ದಾಕ್ಷರಕ್ರಮದಲ್ಲಿ ಲೀನಿಯಾರ್-ಎ ಬರೆಹವನ್ನು ಕೊರೆದಿರುವ ಮಣ್ಣಿನ ಬಿಲ್ಲೆ ಮತ್ತು ಕಲ್ಲುಗಳು, ಲೋಹದ ವಸ್ತುಗಳು, ಮಣ್ಣಿನ ಪಾತ್ರೆಗಳು-ಇವೆಲ್ಲ ಈ ದ್ವೀಪದಲ್ಲಿ ಕ್ರೀಟ್ ನಾಗರಿಕತೆಯ ಮಧ್ಯಯುಗಕ್ಕೆ ಸಂಬಂಧವಿರುವ ಎಲ್ಲ ಸ್ಥಳಗಳಲ್ಲೂ ಹೇರಳವಾಗಿ ದೊರೆಯುತ್ತವೆ. ಇವರ ಬರೆಹವನ್ನು ಇನ್ನೂ ಓದಲಾಗಿಲ್ಲ. ವಸ್ತುಗಳ ಹೆಸರುಗಳು, ಅವುಗಳ ಬೆಲೆಗಳು ಅಥವಾ ಸಂಖ್ಯೆ-ಇವನ್ನು ಪಟ್ಟಿ ಮಾಡಲು ಇದನ್ನು ಬಳಸುತ್ತಿದ್ದಿರಬೇಕು. ಈ ನಾಗರಿಕತೆಯ ಅಂತ್ಯ ಕಾಲದಲ್ಲಿ ನಾಸ್ಸಸ್ ಅರಮನೆಯಲ್ಲಿ ಲೀನಿಯಾರ್-ಎ ಯಿಂದಲೇ ಜನಿಸಿದ ಇನ್ನೊಂದು ಬಗೆಯ ಬರೆಹ, ಲೀನಿಯಾರ್-ಎ ಯಿಂದಲೇ ಜನಿಸಿದ ಇನ್ನೊಂದು ಬಗೆಯ ಬರೆಹ, ಲೀನಿಯಾರ್-ಬಿ, ಉಪಯೋಗಕ್ಕೆ ಬಂತು. ಭಾಷೆ ಗ್ರೀಕ್. ನಾಸ್ಸಸ್‍ನ ಮೇಲೆ ಖಂಡೀಯ ಮೈಸೀನೆಯನರ ಪ್ರಭಾವ ಬಿದ್ದುದನ್ನು ಇದು ತೋರಿಸುತ್ತದೆ. ಈ ಬರಹ ಕ್ರೀಟಿನ ಬೇರೆ ಸ್ಥಳಗಳಲ್ಲಿ ಇನ್ನೂ ಸಿಕ್ಕಿದಂತಿಲ್ಲ.

	ಪ್ರತಿ ಪಟ್ಟಣವೂ ಅದರ ಧರ್ಮಗುರುವಾದ ರಾಜನ ಆಡಳಿತಕ್ಕೊಳಪಟ್ಟಿದ್ದರೂ ಎಲ್ಲ ಪಟ್ಟಣಗಳೂ ಒಂದು ಕೇಂದ್ರಾಡಳಿತಕ್ಕೆ ಒಳಪಟ್ಟಿದ್ದುವೆಂದು ತೋರುತ್ತದೆ. ಏಕೆಂದರೆ ದ್ವೀಪದ ಎಲ್ಲೆಡೆಗಳಲ್ಲೂ ಮನೆಗಳನ್ನು ಕಟ್ಟುವ ವಿಧಾನ, ಧಾರ್ಮಿಕ ಸಂಸ್ಕಾರ ಪದ್ಧತಿ, ಉಡುಗೆ-ತೊಡುಗೆ, ನಿತ್ಯಜೀವನಕ್ಕೆ ಉಪಯೋಗಿಸುತ್ತಿದ್ದ ವಸ್ತುಗಳು, ಆಟ, ಕಲೆ ಎಲ್ಲದರಲ್ಲೂ ಸಾಮ್ಯವಿದೆ. ಲೌಕಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಧರ್ಮಗುರುವಾದ ರಾಜನೇ ಅಗ್ರಗಣ್ಯ. ಇವನು ಉದ್ದನೆಯ ಪುಕ್ಕಗಳ ಕಿರೀಟ ಧರಿಸುತ್ತಿದ್ದ. ನಾಸ್ಸಸ್ ಇವನ ರಾಜಧಾನಿ.

	ಇಂಥ ಅದ್ಭುತ ಹಾಗೂ ಸಂಪದ್ಭರಿತ ನಾಗರಿಕತೆಯನ್ನು ನಿರ್ಮಿಸಲು ಸಹಕಾರಿಯಾಗಿದ್ದದ್ದು ನೌಕಾವ್ಯಾಪಾರ. ಆ ಕಾಲದ ಮಹಾನ್ ಸಂಸ್ಕøತಿ ಕೇಂದ್ರಗಳಾದ ಈಜಿಪ್ಟ್, ಮೆಸಪೊಟೇಮಿಯ ಹಾಗೂ ಸಿಂಧೂ ಕಣಿವೆಯೊಂದಿಗೆ ಇವರ ವ್ಯಾಪಾರ ಬೆಳೆದಿತ್ತು. ಇದರಿಂದಾಗಿ ಹೊಸಹೊಸ ವಿಚಾರಗಳನ್ನು ಮತ್ತು ಕಲಾಕೌಶಲಗಳನ್ನು ತಿಳಿದು ಅವನ್ನು ತಮ್ಮ ನಿತ್ಯಜೀವನದಲ್ಲಿ ಉಪಯೋಗಿಸಿಕೊಳ್ಳುವುದು ಇಲ್ಲಿಯ ಜನರಿಗೆ ಸಾಧ್ಯವಾಯಿತು. ಈ ದ್ವೀಪ ಗ್ರೀಕ್ ತುರ್ಕಿ ಹಾಗೂ ಈಜಿಪ್ಟ್ ಭೂಖಂಡಗಳಿಂದ ದೂರದಲ್ಲಿದೆ. ಆದ್ದರಿಂದ ಆಗ ಇವರಿಗೆ ಹೊರಗಿನ ಆಕ್ರಮಣದ ಭಯ ಇರಲಿಲ್ಲ. ಇವರು ಪಟ್ಟಣಗಳ ಸುತ್ತ ಯಾವ ಬಗೆಯ ಕೋಟೆಯನ್ನೂ ಕಟ್ಟುತ್ತಿರಲಿಲ್ಲ. ಇಪ್ಪೆ ಎಣ್ಣೆ ಮತ್ತು ಮದಿರೆಯನ್ನೂ ಇತರ ವಸ್ತುಗಳನ್ನೂ ಇವರು ಹೊರದೇಶಗಳಿಗೆ ಮಾರುತ್ತಿದ್ದರು. ಇವರು ಕಟ್ಟಿದ್ದ ಬಂದರುಗಳೂ ಕರಾವಳಿಯ ವಸತಿಗಳೂ ಹೇರಳವಾಗಿ ಸಿಕ್ಕಿವೆ. ನಿರೌಖಾನಿ ಮತ್ತು ಅಮ್ನಿಸಾಸ್ ಬಂದರುಗಳು ಮೆಡಿಟರೇನಿಯನ್ನ ಕರಾವಳಿಯಲ್ಲೇ ಅತ್ಯಂತ ಪುರಾತನವಾದವುಗಳು. ಅವು ಯುರೋಪಿನ ಪ್ರಥಮ ಬಂದರುಗಳು.

	ಕ್ರೀಟ್ ದ್ವೀಪದಲ್ಲಿ ವಸತಿ ಪ್ರಾರಂಭವಾದ್ದು ಯಾವಾಗ ಎಂದು ನಿಶ್ಚಯವಾಗಿ ಹೇಳುವುದು ಕಷ್ಟ. ಕ್ರಿ.ಪೂ. 3000ಕ್ಕಿಂತ ಮುಂಚೆ ನವಶಿಲಾಯುಗದ ಜನರು ಏಷ್ಯ ಮೈನರ್, ಸಿರಿಯ, ಪ್ಯಾಲಸ್ಟೀನ್, ಈಜಿಪ್ಟ್ ಮತ್ತು ಲಿಬಿಯಗಳಿಂದ ವಲಸೆ ಬಂದು ಇಲ್ಲಿ ಸ್ಥಿರವಾಗಿ ನೆಲಸಿರಬೇಕೆಂಬುದನ್ನು ಆ ಕಾಲದ ಮಣ್ಣಿನ ಪಾತ್ರೆಗಳು ಹಾಗೂ ಇತರ ಅವಶೇಷಗಳಿಂದ ಹೇಳಬಹುದು. ಈ ಜನರ ಅವಶೇಷಗಳು ಬೆಟ್ಟಗಳ ಗುಹೆಗಳಲ್ಲಿ ದೊರೆತಿವೆ. ಅನಂತರದ ಸುಮಾರು 500 ವರ್ಷಗಳಲ್ಲಿ ಈ ಜನರು ಕ್ರಮ ಕ್ರಮವಾಗಿ ದ್ವೀಪವನ್ನೆಲ್ಲ ಪೂರ್ತಿಯಾಗಿ ಆಕ್ರಮಿಸಿಕೊಂಡರು. ಆ ಕಾಲದಲ್ಲಿ ಇವರು ಈಜಿಪ್ಟಿನೊಂದಿಗೆ ತಮ್ಮ ಸಂಪರ್ಕ ಇಟ್ಟುಕೊಂಡಿದ್ದರು ಎಂಬುದು ಕೆಲವು ಅವಶೇಷಗಳಿಂದ ತಿಳಿದು ಬರುತ್ತದೆ. ಮುಂದೆ ಇವರು ಯೂರೋಪಿನ ಅತ್ಯಂತ ಪುರಾತನ ಹಾಗೂ ಮಹಾನ್ ಸಂಸ್ಕøತಿಯೆನಿಸಿದ ಕ್ರೀಟ್ ಅಥವಾ ಮಿನೋವನ್ ಸಂಸ್ಕøತಿಗೆ ತಳಹದಿಯನ್ನು ಹಾಕಿದರು. ಕ್ರಿ.ಪೂ. 2500ರ ಸುಮಾರಿನಲ್ಲಿ, ಲೋಹದ ಉಪಯೋಗ ತಿಳಿದ ಮೇಲೆ, ಈ ಸಂಸ್ಕøತಿ ಅತ್ಯಂತ ಶೀಘ್ರಗತಿಯಲ್ಲಿ ಮುಂದುವರಿಯಿತು. ಇಲ್ಲಿ ದೊರೆತಿರುವ, ಈಜಿಪ್ಟಿನ ಕೆಲವು ವಸ್ತುಗಳ ಸಹಾಯದಿಂದ ಈ ಸಂಸ್ಕøತಿಯ ಕಾಲವನ್ನು ಹೀಗೆ ವಿಂಗಡಿಸಬಹುದು: ಕ್ರಿ.ಪೂ. 4500ರಿಂದ ಕ್ರಿ.ಪೂ.3000 ವರೆಗಿನದು ಆದಿಕಾಲ; ಕ್ರಿ.ಪೂ. 3000ರಿಂದ ಕ್ರಿ.ಪೂ. 1500ರ ವರೆಗಿನದು ಮಧ್ಯಕಾಲ; 1500 ರಿಂದ ಈ ಸಂಸ್ಕøತಿ ಕೊನೆಗಾಣುವವರೆಗಿನದು ಅಂತ್ಯಕಾಲ.

	ಈ ಸಂಸ್ಕøತಿ ಕೊನೆಗೊಂಡ ರೀತಿಯ ಬಗ್ಗೆ ಕೂಡ ವಾದವಿವಾದಗಳಿವೆ. ಭಾರಿ ಭೂಕಂಪದಿಂದ ಈ ಸಂಸ್ಕøತಿಯ ನಗರಗಳು ಸಂಪೂರ್ಣವಾಗಿ ನಾಶವಾಗಿರಬೇಕೆಂಬುದು ಒಂದು ವಾದ. ಮೈಸೀನೆಯ ಜನರು ಈ ದ್ವೀಪವನ್ನು ಆಕ್ರಮಿಸಿ ಇಲ್ಲಿಯ ಸಂಸ್ಕøತಿಯನ್ನು ನಾಶಮಾಡಿ, ಇದನ್ನು ಗ್ರೀಸ್ ಭೂಖಂಡಕ್ಕೆ ಸೇರಿಸಿಕೊಂಡಿದ್ದಿರಬೇಕೆಂದು ಇನ್ನೊಂದು ವಾದ. ಈ ಎರಡು ವಾದಗಳಿಗೂ ಸಾಕಷ್ಟು ಪುರಾವೆಗಳಿವೆ. ನಾಸ್ಸಸ್ ಅರಮನೆ ಮೂರು ನಾಲ್ಕು ಸಲವಾದರೂ ಭೂಕಂಪದಿಂದ ಬಿದ್ದು ಮತ್ತೆ ನಿರ್ಮಾಣಗೊಂಡಿದ್ದುದಕ್ಕೆ ಪುರಾವೆಗಳಿವೆ. ಕೊನೆಯ ಬಾರಿಗೆ ಸಂಭವಿಸಿದ ಭೂಕಂಪದಿಂದ ಆದ ನಷ್ಟ ಅಗಾಧವಾಗಿದ್ದಿರಬೇಕೆಂದೂ ಅದರಿಂದ ಚೇತರಿಸಿಕೊಳ್ಳಲಾಗದೆ ಈ ಸಂಸ್ಕøತಿ ಕೊನೆಗೊಂಡಿರಬೇಕೆಂದೂ ಹೇಳುವುದಾದರೆ, ಹಿಂದೆ ಅರಮನೆ ಬಿದ್ದುಹೋದಾಗ ಅದನ್ನು ಮತ್ತೆ ಕಟ್ಟಿದವರು ಕೊನೆಯ ಬಾರಿಯೂ ಏಕೆ ಪ್ರಯತ್ನಿಸಲಿಲ್ಲ? ಅಲ್ಲದೆ ಒಂದು ಇಡೀ ಸಂಸ್ಕøತಿಯೇ ಭೂಕಂಪದಿಂದ ಸಂಪೂರ್ಣವಾಗಿ ನಾಶವಾಗಲು ಸಾಧ್ಯವೇ?-ಎನ್ನುವ ಸಂದೇಹಗಳಿಗೆ ಸಮಂಜಸವಾದ ಉತ್ತರ ದೊರೆತಿಲ್ಲ. ಈ ನಾಗರಿಕತೆಯ ಅಂತ್ಯಕಾಲದಲ್ಲಿ ಗ್ರೀಸ್ ಭೂಖಂಡದಲ್ಲಿ ಪ್ರಾಬಲ್ಯಕ್ಕೆ ಬರುತ್ತಿದ್ದ ಮೈಸೀನೆಯ ಪ್ರಭಾವ ಈ ದ್ವೀಪದ ಮೇಲೆ ಬಿದ್ದಿರುವುದಕ್ಕೆ ಆಧಾರಗಳಿವೆ. ಈ ಸಂಸ್ಕøತಿ ಕೊನೆಗೆ ಭೂಖಂಡದ ಸಂಸ್ಕøತಿಯಲ್ಲಿ ಐಕ್ಯವಾಯಿತು. ಈ ಸಂಸ್ಕøತಿಗೆ ಸಂಬಂಧಿಸಿದ ವಿಷಯಗಳು ಗ್ರೀಕ್ ಮಹಾಕಾವ್ಯಗಳಲ್ಲಿ ದಂತಕತೆಗಳಾಗಿ ಸೇರಿಕೊಂಡಿವೆ. ಆದ್ದರಿಂದ ಮೈಸಿನೆಯ ಜನರ ಆಕ್ರಮಣದಿಂದ ಕ್ರೀಟ್ ಸಂಸ್ಕøತಿ ಕೊನೆಗೊಂಡಿತೆಂಬ ವಾದ ಹೆಚ್ಚು ಸಮಂಜಸವೆನ್ನಬಹುದು.

	ಈ ಸಂಸ್ಕøತಿ ಹೇಗೇ ಕೊನೆಗೊಂಡಿರಲಿ, ಅಂತೂ ಇದು 10-11 ಶತಮಾನಗಳ ಕಾಲ ಭವ್ಯವಾಗಿ ಮೆರೆದು, ಯೂರೋಪಿನ ಪ್ರಥಮ ಸಂಸ್ಕøತಿಯಾಗಿದ್ದು ಅನಂತರ ಸಂಪೂರ್ಣ ನಾಶವಾಯಿತು.  		(ನೋಡಿ- ಈಜಿಯನ್-ನಾಗರಿಕತೆ)
(ಬಿ.ಎನ್.ಎ.ಆರ್.; ಎಂ.ಎಂ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ